ಶಂಕರ ಮೊಕಾಶಿ ಪುಣೇಕರ
1928-2004. ಹೊಸಗನ್ನಡ ಸಾಹಿತ್ಯದ ನವ್ಯಯುಗದ ಪ್ರಖ್ಯಾತ ವಿಮರ್ಶಕ, ಕಾದಂಬರಿಕಾರ, ಕವಿ ಹಾಗೂ ನಾಟಕಕಾರರು. ಇಂಗ್ಲಿಷ್‍ನಲ್ಲಿ ವಿಮರ್ಶೆಗಳನ್ನೂ ಕವನಗಳನ್ನೂ ಬರೆದು ಯಶಸ್ವಿಯಾದವರು. ಸಾಹಿತ್ಯ ಹಾಗೂ ವ್ಯಕ್ತಿತ್ತ್ವ ಎರಡರಲ್ಲೂ ಒಂದು ಬಗೆಯ ವಿಲಕ್ಷಣ ನಿಲುವು ಇವರದು. ಈ ವಿಲಕ್ಷಣತೆಯೇ ಇವರ ಸಾಹಿತ್ಯ, ವ್ಯಕ್ತಿತ್ತ್ವಗಳಲ್ಲಿ ವಿಶಿಷ್ಟ ಛಾಪನ್ನು ಮೂಡಿಸಿರುವುದು ಗಮನೀಯ. ಇವರು 1928 ಮೇ 8 ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಪುಣೇಕರರನ್ನು ಬಾಲ್ಯದಲ್ಲಿಯೇ ಕಳೆದುಕೊಂಡು ತಾತನ (ತಾಯಿಯ ತಂದೆ) ಮನೆಯಲ್ಲಿ ಬೆಳೆದು ವಿದ್ಯಾಭ್ಯಾಸ ಪಡೆದರು. ಆರಂಭದಲ್ಲಿ ಶಾಲಾ ಶಿಕ್ಷಕರಾಗಿ, ಅನಂತರ ಆರ್.ಪಿ.ಡಿ ಕಾಲೇಜು, ಬೆಳಗಾಂವಿಯ ಲಿಂಗರಾಜ ಕಾಲೇಜು, ಮುಂಬಯಿಯ ಕೆ.ಸಿ.ಕಾಲೇಜು ಗಳಲ್ಲಿ ಉಪನ್ಯಾಸಕರಾಗಿದ್ದರು. ಐ.ಐ.ಟಿ.ಯಲ್ಲಿ ಹತ್ತುವರ್ಷ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರವಾಚಕರಾಗಿ ಹತ್ತು ವರ್ಷ ಸೇವೆ ಸಲ್ಲಿಸಿದರು. ತಮ್ಮ ಸೇವಾವಧಿಯ ಕಡೆಯ ಕೆಲವು ವರ್ಷಗಳನ್ನು ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಳೆದು 1988ರಲ್ಲಿ ನಿವೃತ್ತರಾದರು. ನಿವೃತ್ತಿಯ ಅನಂತರ ಧಾರವಾಡದಲ್ಲಿ ನೆಲೆಸಿದ್ದರು.

ಶಾಲಾಕಾಲೇಜುಗಳಲ್ಲಿ ಅಧ್ಯಯನ ಮಾಡುವ ಸಂದರ್ಭದಲ್ಲಿ ಅಧ್ಯಾಪಕರಾಗಿದ್ದ ಎಸ್.ಜಿ.ನಾಡಗೀರ್, ಎನ್.ಕೆ.ಕುಲಕರ್ಣಿ, ಬಿ.ಎಂ.ಶ್ರೀ, ವಿ.ಕೃ.ಗೋಕಾಕ್, ಆರ್ಮಾಂಡೊ ಮೆನಜಿಸ್ ಮೊದಲಾದವರ ಪ್ರಭಾವ, ಸ್ಫೂರ್ತಿ ಇವರ ಮೇಲಾಯಿತು. ಇವರು ಕಾವ್ಯ, ಕಾದಂಬರಿ, ನಾಟಕ, ವಿಮರ್ಶೆ ಎಲ್ಲವೂ ಸೇರಿದಂತೆ ಕನ್ನಡದಲ್ಲಿ 13 ಕೃತಿಗಳನ್ನೂ ಇಂಗ್ಲಿಷ್ ನಲ್ಲಿ 17 ಕೃತಿಗಳನ್ನೂ ರಚಿಸಿದ್ದಾರೆ. ದ ಲೇಟರ್ ¥sóÉೀಸ್ ಇನ್ ದ ಡೆವಲಪ್‍ಮೆಂಟ್ ಆ¥sóï ಡಬ್ಲ್ಯು.ಬಿ. ಯೇಟ್ಸ್ ಎಂಬ ಇವರ ಸಂಶೋಧನ ಪ್ರಬಂಧಕ್ಕೆ 1965ರಲ್ಲಿ ಪಿಎಚ್.ಡಿ. ಪದವಿ ದೊರೆತಿದೆ.

	ಮಾಯಿಯ ಮೂರು ಮುಖಗಳು ಎಂಬ ಇವರ ಕವನ ಸಂಕಲನ ನವ್ಯಕಾವ್ಯ ಹೆಚ್ಚು ಪ್ರಚಾರದಲ್ಲಿದ್ದಾಗ ವಿಭಿನ್ನ ರೀತಿಯಲ್ಲಿ ಬರೆದುದಾಗಿದೆ. ಭಾಷಿಕವಾಗಿ ಇಲ್ಲಿನ ಕವನ ಗಳು ನವೋದಯ ಕಾವ್ಯಕ್ಕೆ ಹತ್ತಿರವಾಗಿವೆ. ಸ್ವಂತದ್ದೆನಿಸುವ ಚಿಂತನಾ ಪ್ರಧಾನ ಧಾಟಿ ಈ ಕವನಗಳ ವೈಶಿಷ್ಟ್ಯ. ಮಾತೃತ್ವವನ್ನು ಕಾವ್ಯದಲ್ಲಿ ವಿಶಿಷ್ಟ ಬಗೆಯಲ್ಲಿ ಅರಸಿರುವ ರೀತಿ ವಿನೂತನವಾದದ್ದು.

	ಗಂಗವ್ವ-ಗಂಗಾಮಾಯಿ ಇವರ ಪ್ರಸಿದ್ಧ ಕಾದಂಬರಿ. ಕಾವ್ಯದಲ್ಲಿ ಹೇಗೋ ಹಾಗೆ ನವ್ಯವನ್ನು ಧಿಕ್ಕರಿಸುವ ಮತ್ತು ಸಂಪ್ರದಾಯವನ್ನು ಬೇಕೆಂದೇ ಎತ್ತಿಹಿಡಿಯುವ ನಿಲುವು ಈ ಕಾದಂಬರಿಯಲ್ಲಿದೆ. ಈ ಕೃತಿಯನ್ನು ನ್ಯಾಷನಲ್ ಬುಕ್ ಟ್ರಸ್ಟ್ ಭಾರತದ ಬಹುತೇಕ ಎಲ್ಲ ಅಧಿಕೃತ ಭಾಷೆಗಳಿಗೆ ಅನುವಾದ ಮಾಡಿಸಿದೆ. ಅವಧೇಶ್ವರಿ ಇವರ ಮತ್ತೊಂದು ಕಾದಂಬರಿ. ವೇದಕಾಲೀನ ರಾಜಕೀಯ ಕಾದಂಬರಿ ಎಂದು ಇದನ್ನು ಲೇಖಕರು ಕರೆದಿದ್ದರೂ ಇಲ್ಲಿನ ರಾಜಕೀಯಕ್ಕೆ ಸಾರ್ವಕಾಲಿಕತೆ ಇದೆ. ಒಂದು ಇಡೀ ಸಂಸ್ಕøತಿಯ ಜನಜೀವನವನ್ನು ಯಥಾವತ್ತಾಗಿ ಚಿತ್ರಿಸಲು ಲೇಖಕರು ಇಲ್ಲಿ ಪ್ರಯತ್ನಿಸಿದ್ದಾರೆ. ಈ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ (1988). ಇವರ ನಟನಾರಾಯಣಿ ಎಂಬ ಕಾದಂಬರಿ ಸುಧಾ ವಾರಪತ್ರಿಕೆಯ ಕಾದಂಬರಿ ಸ್ಪರ್ಧೆಗಾಗಿ ಬರೆದದ್ದು; ಸ್ಪರ್ಧೆಯಲ್ಲಿ ಬಹುಮಾನವನ್ನೂ ಗಳಿಸಿತು.

ಪಾಶ್ಚಾತ್ಯ ವಿಮರ್ಶೆಯ ಇತಿಹಾಸ, ಬೇಂದ್ರೆಯವರ ಕಾವ್ಯಮೀಮಾಂಸೆ, ಸಾಹಿತ್ಯ ಮತ್ತು ಅಭಿರುಚಿ ಇವು ವಿಮರ್ಶೆಯ ಕೃತಿಗಳು. ಸತ್ಯಸಾಯಿ ಭಾಷಣಗಳು, ಶ್ರೀ ರಾಮಾಯಣದರ್ಶನಂ (ಇಂಗ್ಲಿಷ್ ಅನುವಾದ)-ಇವು ಅನುವಾದಿತ ಕೃತಿಗಳು. ಪಾಶ್ಚಾತ್ಯ ವಿಮರ್ಶೆಯ ಇತಿಹಾಸ ಎಂಬ ಕೃತಿಯಲ್ಲಿ ಪಾಶ್ಚಾತ್ಯ ವಿಮರ್ಶೆಯ ವಿಚಾರಗಳನ್ನು ಮಂಡಿಸುವ ಜೊತೆಯಲ್ಲಿಯೇ ಭಾರತೀಯ ಮೀಮಾಂಸಾ ವಿಚಾರಗಳನ್ನೂ ತಾಳೆ ನೋಡುವ ಒಂದು ಬಗೆಯ ತೌಲನಿಕ ಕ್ರಮ ಇದರ ವೈಶಿಷ್ಟ್ಯವಾಗಿದೆ. ಹೆಚ್ಚು ಪ್ರಚಾರ ಪಡೆದಿದ್ದ ಇಂಗ್ಲಿಷ್ ರೊಮ್ಯಾಂಟಿಸಿಸಂನ ಮೇಲೆ ಹೇಗೆ ಫ್ರೆಂಚ್ ಚಿಂತಕ ರೂಸೋನ ಪ್ರಭಾವವಾಗಿದೆ ಎಂದು ಗುರುತಿಸಿರುವ ಇವರ ತೌಲನಿಕ ಅಧ್ಯಯನ ಹೆಚ್ಚು ಮಹತ್ತ್ವದ್ದಾಗಿದೆ. ಶ್ರೀ ಸಂಗೀತ ನಾಟ್ಯನಾಂದೀ ಪರಿಪೂರ್ಣ ಹಾಸ್ಯ ಪ್ರಧಾನ ಸಾಂಸಾರಿಕ ಕಂಪನಿ ಏಕಾಂಕ ನಾಟಕ ಇದು ಇವರ ನಾಟಕ ಕೃತಿ. ಇಂಗ್ಲಿಷ್‍ನ ಕಾಮಿಡಿ ಆ¥sóï ಎರರ್ಸ್ ಪ್ರಕಾರದ ನಾಟಕಗಳ ಮಾದರಿಯಲ್ಲಿ ರಚಿಸಹೊರಟ ನಾಟಕವಿದು. “ಉತ್ತರ ಕರ್ನಾಟಕದ ಪರಿಸರದಲ್ಲಿ ವಿಪರ್ಯಾಸ ನಾಟಕಗಳ ಸಾಲಿಗೆ ನಾಂದಿಯಂತಿರುವುದೇ ಈ ನಾಟಕದ ಹೆಚ್ಚುಗಾರಿಕೆ” ಎನ್ನಬಹುದು.

	ದ ಕ್ಯಾಪ್ಟೀವ್, ದಿ ಪ್ರಿಟೆಂಡರ್, ಎಪಿಸಲ್ ಟು ಡೇವಿಡ್ ಮಕ್ ಕುಚಿಯೋನ್, ದ ಟೆಂಟ್ ಪೋಲ್ ಪ್ಯಾರಡಿಮ್ಸ್, ಹೋಮಿಂಗ್ ಬರ್ಡ್, ಮೊಹೆಂಜೊದಾರೊ ಸೀಲ್ಸ್, ಇಂಡೋ ಆಂಗ್ಲಿಯನ್ ಕ್ರೀಡ್, ಅವಧೂತ ಗೀತಾ, ಥಿಯೆಟ್ರಿಕಲ್ ಅಂಡ್ ಪ್ರ್ಯಾಕ್ಟಿಕಲ್ ಸ್ಟಡೀಸ್ ಇನ್ ಇಂಡೋ-ಇಂಗ್ಲಿಷ್ ಲಿಟರೇಚರ್, ವಿ.ಕೆ.ಗೋಕಾಕ್, ಪರ್ಸ್‍ಪೆಕ್ಟಿವ್ಸ್ ಆನ್ ಇಂಡಿಯನ್ ಡ್ರಾಮಾ ಇನ್ ಇಂಗ್ಲಿಷ್ (ಎಮ್.ಕೆ. ನಾಯಕ್ ಅವರ ಜೊತೆಗೂಡಿ ಸಂಪಾದಿತ)-ಇವು ಇವರ ಕೆಲವು ಇಂಗ್ಲಿಷ್ ಕೃತಿಗಳು. ದ ಪ್ರಿಟೆಂಡರ್ ಎಂಬ ಕವನ ಸಂಕಲನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಮಹೋತ್ಸವ ಪ್ರಶಸ್ತಿಯೂ ಹೋಮಿಂಗ್ ಬರ್ಡ್ ಎಂಬ ಕೃತಿಗೆ ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಪ್ರಶಸ್ತಿಯೂ ಲಭ್ಯವಾಗಿವೆ.

	ಇವರ ಸಂಶೋಧನೆಯ ಕ್ಷೇತ್ರ ಸಾಹಿತ್ಯದಲ್ಲಷ್ಟೆ ಅಲ್ಲದೆ ಹಲವು ವಿಚಾರಗಳನ್ನೊಳಗೊಂಡಿದೆ. ಕಂಪಲ್ಸರಿ ಕ್ಯಾಪಿಟೇಷನ್ ಸ್ಕೀಮ್, ಮೊಹೆಂಜೊದಾರೊ ಮುದ್ರಿಕೆಗಳು, ಭಾರತೀಯ ಚಿಂತನಧಾರೆಗೆ ಹರಿಜನರ ಕೊಡುಗೆ-ಇಂಥ ಸಂಶೋಧನ ಕೃತಿಗಳನ್ನೂ ರಚಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಚೋಮ್‍ಸ್ಕಿ-ಸ್ಕಿನ್ನರ್ ಪದ್ಧತಿಯನ್ನು ಕಂಡುಹಿಡಿದರು. ಮುಂಬಯಿಯ ಟೈಮ್ಸ್ ಆ¥sóï ಇಂಡಿಯ ಪತ್ರಿಕೆಯಲ್ಲಿ ಹಲವು ವರ್ಷಗಳಕಾಲ ಸಂಗೀತ ವಿಮರ್ಶೆಗಳನ್ನು ಬರೆದಿದ್ದಾರೆ.

1984ರಲ್ಲಿ ಯೂಗೋಸ್ಲಾವಿಯದಲ್ಲಿ ನಡೆದ ವಿಶ್ವಕಾವ್ಯ ಸಮ್ಮೇಳನದಲ್ಲಿ ಇವರು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಇಂಗ್ಲೆಂಡ್, ಬಲ್ಗೇರಿಯ, ಹಂಗರಿ ಮೊದಲಾದ ದೇಶಗಳಲ್ಲಿ ಪ್ರವಾಸ ಕೈಗೊಂಡು ಭಾರತದ ವೈದಿಕ ಮತ್ತು ಮಹಾಕಾವ್ಯ ಕಾಲದ ಸಂಸ್ಕøತಿಗೂ ಪಾಶ್ಚಾತ್ಯ ದೇಶಗಳ ಸಂಸ್ಕøತಿಗೂ ಇರುವ ಸಂಬಂಧಗಳ ಬಗೆಗೆ ಸಂಶೋಧನೆ ನಡೆಸಿದ್ದರು. ಇವರು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರೂ (1983-87) ರಾಜ್ಯಸಾಹಿತ್ಯ ಅಕಾಡೆಮಿ ಸದಸ್ಯರೂ (1988) ಜ್ಞಾನಪೀಠ ಪ್ರಶಸ್ತಿ ಕನ್ನಡ ಸಲಹಾ ಸಮಿತಿಯ ಸದಸ್ಯರೂ (1984) ಆಗಿದ್ದರು. ಇವರು 2004ರಲ್ಲಿ ಧಾರವಾಡದಲ್ಲಿ ನಿಧನರಾದರು.		
	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ